Total Pageviews

Wednesday, February 22, 2017

ಶೂದ್ರರೊಂದಿಗೆ ‘ಹೀಗೆಯೇ ಒಂದಷ್ಟು’....



ಹೊಳೆ ಬೆಟ್ಟ ಕಾನು ಹೂ-ಬನವ ಸುತ್ತಾಡಿದೆನು
ಹಣತೆಯಾರುವತನಕ ಹಾಡು ಹಾಡಿ;
ಶಾಂತಿ ಸಿಕ್ಕಲೇ ಇಲ್ಲ ನನಗೆ ಜೀವನದಲ್ಲಿ
ನಿಮಗೆ ಗೊತ್ತೆ ವಿಳಾಸ ನನಗೆ ಹೇಳಿ
                                                                       -ಕೆ.ಎಸ್.ನರಸಿಂಹಸ್ವಾಮಿ
              ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಸಮಾರಂಭದಲ್ಲಿ ಶೂದ್ರ ಮೇಲಿನ ಕವಿಯ ಇದೇ ವಿಷಾದ ಹಾಗೂ ಹುಡುಕಾಟದ ನೆಲೆಯಲ್ಲಿಯೇ ತಮ್ಮ ಅಂತರಂಗದ ತುಡಿತಗಳನ್ನು ಬಿಚ್ಚಿಟ್ಟರು. ಬರಹದ ಮೂಲಕ ಬಿಡಿಸಿಕೊಳ್ಳಲು ಯತ್ನಿಸುವ ಶೂದ್ರ ಶ್ರೀನಿವಾಸ ಎಂಬ ಸನಾತನ ಜೀವ ನಮ್ಮ ಮಧ್ಯದ ಅತ್ಯಂತ ಬೆಚ್ಚನೆಯ, ಭಾವುಕತೆಯ ಒಂದು ವ್ಯಕ್ತಿತ್ವ. ಬಸಿಯುವುದೆಲ್ಲವನ್ನು ಬಾಚಿಕೊಳ್ಳುವ ಹಂಬಲ ಇದಕ್ಕೆ.
ಮುಂದೊರೆಯುವ ಮುಂಚೆ ಶೂದ್ರರ ಕೃತಿ ಬಿಡುಗಡೆಯ ದಿನ ನನ್ನ ಬಯಕೆಯೊಂದು ಕೈಗೂಡಿದ್ದರ ಕುರಿತು ಹೇಳದೇ ಹೋದರೆ ಆತ್ಮವಂಚನೆಯಾದೀತು. ನ್ಯಾಷನಲ್ ಕಾಲೇಜು ಆವರಣ ಕುರಿತು ಎಚ್. ಎನ್ ಎಂಬ ಸರಳ ಬದುಕಿನ ಕಾರಣಕ್ಕಾಗಿಯೇ ವಿಶೇಷ ವ್ಯಾಮೋಹ ನನಗೆ. ಹಾಗೆ ನೋಡಿದರೆ ಇಲ್ಲಿ ಇದು ನನ್ನ ಎರಡನೆಯ ಕಾರ್ಯಕ್ರಮ. ಆದರೆ ಇದು ಭಿನ್ನವಾಗಿ ಕಾಣಲು ಕಾರಣ ಸಂಗಾತಿ ಪದ್ದು, ಮೂರು ಮಕ್ಕಳಾದ ಸಿದ್ಧಾರ್ಥ, ತರಂಗಿಣಿ ಹಾಗೂ ಕಬೀರ. ನ್ಯಾಷನಲ್ ಕಾಲೇಜೆಂದರೆ ಬುದ್ಧಿ ಹಾಗೂ ಭಾವಗಳ ವಿಕಸನದ ನೆಲ. ಇಲ್ಲಿ ರೈತನಂತೆ ನನ್ನ ಸಂತಾನಗಳೆಂಬ ಬೀಜಗಳ ಹೊತ್ತುಕೊಂಡು ಬಂದಾಗ ಯಾರಿಗೆ ಅಭಿಮಾನವಾಗುವುದಿಲ್ಲ ಹೇಳಿ? ತಂದೆಯಾದವ ಕಟ್ಟಿಕೊಡಬೇಕಾದ ನಮ್ಮ ಪರಂಪರೆ ಮತ್ತೆ ಇತಿಹಾಸದ ಬುತ್ತಿ ಇದು. ಬ್ಯಾಂಕು ಖಾತೆಗಳಲ್ಲಿ ನನ್ನ ಮಕ್ಕಳಿಗಾಗಿ ಎಂದು ಕೂಡಿಟ್ಟ ಒಂದಿಷ್ಟು ಚಿಲ್ಲರೆ ಹಣ ಖಾಲಿಯಾದಾಗ, ಬದುಕೆಲ್ಲವೂ ಬೆಳಕಾಗಿ ಇಂಥ ನೆಲ ಹಾಗೂ ಎಚ್.ಎನ್ ರಂಥ ವ್ಯಕ್ತಿತ್ವಗಳು ಸಂತಾನಗಳನ್ನು ಬೆಳಕಿನಂತೆ ನಡೆಯಿಸಿಕೊಂಡು ಹೋಗಿ ಬಿಡುತ್ತಾರೆ.
 ಅಂದಹಾಗೆ, 19/02/2017 ರಂದು ಬೆಂಗಳೂರಿನ ಅಭಿನವ ಹಾಗೂ ಹೇಮಂತ ಪ್ರಕಾಶನಗಳಿಂದ ಪ್ರಕಟಗೊಂಡ ಶೂದ್ರರ ಮೂರು ಕೃತಿಗಳಾದ ದಿನ (ಕಾದಂಬರಿ), ‘ಹೀಗೆಯೇ ಒಂದಷ್ಟು (ಲೇಖನಗಳು), ‘ಸೂಜಿ ಮತ್ತು ದಾರ (ಲೇಖನಗಳು) ಕೃತಿಗಳಲ್ಲಿಹೀಗೆಯೇ ಒಂದಷ್ಟುಕೃತಿ ಕುರಿತು ಮಾತನಾಡುವ ಯೋಗ ನನ್ನದು. ಮೂಲಒಂದಿಷ್ಟುಎನ್ನುವ ಶೂದ್ರರ ಪದವನ್ನುಒಂದಷ್ಟುಎಂದು ಬದಲಾಯಿಸಿದವರು ಕವಿ ಎಚ್.ಎಸ್. ವೆಂಕಟೇಶಮೂರ್ತಿ. ಅಂದು ಕೃತಿ ಬಿಡುಗಡೆಕಾರರೂ ಅವರೇ, ಜೊತೆಗಿದ್ದವರು ವಿಕ್ರಮ ವಿಸಾಜಿ, ಜಯಶಂಕರ್ ಹಲಗೂರು, ಪ್ರೊ. ನಾಗರಾಜ ರೆಡ್ಡಿ, . ರವಿಕುಮಾರ, ಹೇಮಂತ, ಪಿ. ಚಂದ್ರಿಕಾ, ಹೇಮಲತಾ ಮೂರ್ತಿ, ಚಂಪಾ, ಧರಣೇಂದ್ರ ಕುರಕುರಿ, ಜರಗನಹಳ್ಳಿ ಶಿವಶಂಕರ ಹಾಗೂ ಇತರರು.
 1971 ನನ್ನ ಜನ್ಮ ವರ್ಷ ಅಂತೆಯೇ ಶೂದ್ರ ಪತ್ರಿಕೆಯ ಜನನವಾದದ್ದು 1973 ರಲ್ಲಿ. ನನಗೀಗ 45, ಶೂದ್ರ ಪತ್ರಿಕೆಗೆ 43. ನನಗೆ ಮೂರು ಮಕ್ಕಳು, ಶೂದ್ರರಿಗೆ ಪತ್ರಿಕೋದ್ಯಮದ ಮೂರು ಮುಖಗಳು. (ಶೂದ್ರ, ಸಲ್ಲಾಪ ಮತ್ತು ನೆಲದ ಮಾತು)
ಒಬ್ಬ ಲೇಖಕನ ಅಥವಾ ಒಂದು ಹಾಡಿನ, ಕಾಮದ ಅಥವಾ ಧ್ಯಾನದ ಸುಖ ವೇದ್ಯವಾಗುವುದು ಅದು ನನ್ನಲ್ಲಿ ಐಕ್ಯಗೊಂಡಾಗ ಮಾತ್ರ. ಶೂದ್ರರ ಕೃತಿಹೀಗೆಯೇ ಒಂದಷ್ಟುನನ್ನಲ್ಲಿ, ನನ್ನನ್ನೇ ನಾನು ಕೃತಿಯಲ್ಲಿ ಸ್ಥಿರಗೊಳಿಸಿಕೊಂಡಿದ್ದಕ್ಕಾಗಿ ಒಂದು ಪ್ರೀತಿಯ ಓದಾಗಿ ದಕ್ಕಿದೆ.
 24 ಲೇಖನಗಳ, ಬಸವರಾಜ ಕಲ್ಗುಡಿಯವರ ಅಪರೂಪದ ಕಾವ್ಯಾತ್ಮಕ ಮುನ್ನುಡಿಯ, 167 ಪುಟಗಳ, ಅಭಿನವ ಪ್ರಕಾಶನದಿಂದ ಪ್ರಕಟಗೊಂಡ ಹೊತ್ತಿಗೆಯಲ್ಲಿ ಅನಾವರಣಗೊಂಡ ಕಣ್ಣು, ಕನಸು, ವಾಸ್ತವ, ಪರಂಪರೆ ಹಾಗೂ ವರ್ತಮಾನಗಳ ಒಳಸುಳಿಗಳಲ್ಲಿ ನಾನು ಕಳೆದ 3 ದಿನಗಳಿಂದ ಸಿಲುಕಿ, ಒಂದಿಷ್ಟು ಬೇಸರ, ಅಭಿಮಾನ, ಸಮ್ಮತಿ ಹಾಗೂ ಸಿಡಿಮಿಡಿಯ ಭಾವದ ಏರಿಳಿತಗಳಿಗೆ ಏರಿಳಿದು ಬಂದಿರುವೆನಾದರೂ ಪುಸ್ತಕದ ಮುಖಪುಟವನ್ನು ಕ್ಷಣ ನಿಮ್ಮೊಂದಿಗೆ ಸುಖಿಸುತ್ತಿದ್ದೇನೆ.
ಮುಖವಿಲ್ಲದ ಮಾತು, ಅನುಸಂಧಾನ, ಜಗಳ ಅಥವಾ ಸೃಷ್ಟಿಕ್ರಿಯೆಯ ಯಾವುದೇ ಚಟುವಟಿಕೆ ಎಷ್ಟೇ ದೀರ್ಘಕಾಲ ನಡೆದಿದ್ದರೂ ಕೂಡ ಅದು ನಮ್ಮೊಳಗೆ ಸ್ಥಿತಗೊಳ್ಳುವುದಿಲ್ಲ. ಅಲ್ಲವೇ?
 ಕಲ್ಗುಡಿಯವರ ಮುನ್ನುಡಿಯ ಎರಡು ಸಾಲುಗಳು ನನ್ನನ್ನು ಬಹಳ ಕಾಡಿವೆ. ಮುನ್ನುಡಿಯ ಕೊನೆಯ ಎರಡು ಸಾಲುಗಳಲ್ಲಿ ಅವರು ದಾಖಲಿಸುತ್ತಾರೆ, “ಶೂದ್ರ ನಿಜವಾಗಿಯೂ ಹೆಣ್ಣಿನ ಮಾರ್ದವತೆ ಇರುವ ಒಂದು ಮನಸ್ಸು ಎಂದು ಖಚಿತವಾಗಿ ಹೇಳಬಹುದು. ಹೌದು, ಕೃತಿಯ ಕೈ ಹಿಡಿದುಕೊಂಡು ಹೋದಾಗ, ಶೂದ್ರ ಮೂರ್ತಿರಾವ್ ಅವರೊಂದಿಗಿನ ಎಕ್ಕೆ ಗಿಡದ ಬಳಿ ಕುಳಿತು ನಡೆಸಿದ ಮಾತು-ಕತೆ ಇರಬಹುದು, ತಮ್ಮ ಮನೆಯ ಕಂಪೌಂಡಿನಲ್ಲಿ ಬೆಳೆದ ಸಂಪಿಗೆ ಮರದ ಹೂಗಳನ್ನು ಕಿತ್ತುಕೊಳ್ಳಲು ಬಂದ ಹೆಣ್ಣುಮಕ್ಕಳ ಬೆರಗುಗಣ್ಣನ್ನು, ಬಟ್ಟಲುಕಣ್ಗಳ ಸೊಬಗನ್ನು ದಾಖಲಿಸುವ ರೀತಿ ಇರಬಹುದು, ದೆಹಲಿಯಲ್ಲಿ ತಾವು ಭೇಟಿ ಮಾಡಿದ ಅಪರೂಪದ ಮಹಿಳೆಯರ ಭೆಟ್ಟಿಯ ಸಂದರ್ಭಗಳನ್ನು ದಾಖಲಿಸಿದ ಕ್ರಮ ಇರಬಹುದು, ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿನ ಯುವತಿಯರೊಂದಿಗಿನ ಸಂಭಾಷಣೆಗಳನ್ನು ಅವರು ಹಂಚಿಕೊಂಡ ಶೈಲಿ ಇರಬಹುದು ಎಲ್ಲ ಪುಟಗಳನ್ನು ನೋಡಿದಾಗ ಕಲ್ಗುಡಿಯ ಮಾತು ಖಚಿತವಾಗುತ್ತದೆ.
ಸಂದರ್ಭದಲ್ಲಿ ಹೆಣ್ಣಿಗೂ ಪ್ರಪಂಚಕ್ಕೂ, ಹೆಣ್ಣಿಗೂ ಬಳ್ಳಿಗೂ, ಹೆಣ್ಣಿಗೂ ಹೂವಿಗೂ, ಹೆಣ್ಣಿಗೂ ನಿಸರ್ಗಕ್ಕೂ ಎಷ್ಟು ಅವಿನಾಭಾವ ಸಂಬಂಧ ಇದೆ ಎನ್ನುವುದನ್ನು ಅಲ್ಲಲ್ಲಿಹೀಗೆ ಒಂದಷ್ಟುಕೃತಿಯಲ್ಲಿ ನಾವು ಗಮನಿಸುತ್ತ ಹೋಗುತ್ತೇವೆ. ವ್ಯಾಪ್ತಿಯಲ್ಲಿ ನನ್ನ ಇನ್ನೊಂದು ಓದಿನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿತ್ತದೆ-
ಚೆಲುವೆಯರ ಸ್ಪರ್ಶದಿಂದ ಪ್ರಿಯಾಂಗು ಬಳ್ಳಿ ಹೂ ಬಿಡುತ್ತದೆ. ಬಕುಲದ ಬಳ್ಳಿ ಹೂ ಬಿಡುವ ಸಮಯದಲ್ಲಿ ಸ್ತ್ರೀಯರು ಬಾಯಿಂದ ಉಗುಳುವ ಮದಿರೆಯನ್ನು ಬಯಸುತ್ತದೆ. ಅದರಂತೆ ಸ್ತ್ರೀಯರ ಎಡಗಾಲ ಸ್ಪರ್ಶದಿಂದ ಅಶೋಕ ವೃಕ್ಷ ಹೂ ಬಿಡುತ್ತದೆ. ತಿಲಕ ಬಳ್ಳಿ ಸ್ತ್ರೀಯರ ನೋಡುವಿಕೆಯಿಂದ, ಕುರುಬಕವು ಸ್ತ್ರೀಯರ ಆಲಿಂಗನದಿಂದ ವಿಕಸಿತವಾಗುತ್ತದೆ. ಮಂದಾರ ವೃಕ್ಷವು ಸ್ತ್ರೀಯರ ಪ್ರಿಯನುಡಿಯಿಂದ, ಚಂಪಕವು ಅವರ ಮುಗುಳ್ನಗೆಯಿಂದ, ಚೂತ ಅಂದರೆ ಮಾವು ಸ್ತ್ರೀಯರ ಬಾಯುಸಿರಿನಿಂದ, ಮೇರು ವೃಕ್ಷವು ಸ್ತ್ರೀಯರ ಗೀತದಿಂದ ಹಾಗೂ ಕರ್ಣಿಕಾರ ಗಿಡ ಸ್ತ್ರೀಯರ ನರ್ತನದಿಂದ ವಿಕಾಸವಾಗುತ್ತದೆ
ಅಪರೂಪದ ಸಾಲುಗಳನ್ನು ದಾಖಲಿಸುವ ಉದ್ದೇಶವೇ ಸ್ತ್ರೀ ಸ್ಪರ್ಶವಿಲ್ಲದ, ಹೆಣ್ತನದ ಸ್ಪರ್ಶವಿಲ್ಲದ ಒಂದೇ ಒಂದು ಲೇಖನವನ್ನು ನೀವು ಶೂದ್ರರ ಕೃತಿಯಲ್ಲಿ ಕಾಣಲು ಸಾಧ್ಯವಿಲ್ಲ ಎನ್ನುವುದನ್ನು ಖಚಿತಪಡಿಸಲು. ಅವರ ಭಾಷೆಯ ಗತಿ, ಆಂಗಿಕತೆ ಹಾಗೂ ತಬ್ಬುವಿಕೆಯಲ್ಲಿ ಇಡೀ ವಿಶ್ವವನ್ನೇ ತಾಯ್ತನದ ಹೆಬ್ಬಾಗಿಲಿನ ಮೂಲಕ ನೋಡಿರುವ ಶೈಲಿಯನ್ನು ಗಮನಿಸಬಹುದಾಗಿದೆ.
 ಇಲ್ಲಿಯ ಪಾತ್ರಗಳಾದ ಗಾಂಧಿ, ಮೂರ್ತಿರಾವ್, ಬಸವಣ್ಣ, ಕುವೆಂಪು, ಬೇಂದ್ರೆ, ಕಾರಂತ, ಡಾವಿನ್ಸಿ, ರಾಜಾಜಿ, ಬಿ.ವಿ ಕಾರಂತ, ಖಾಸನೀಸ, ಮಾಸ್ತಿ, ದೇಸಾಯಿ, ಜಾನ್ ಹಾರ್ವರ್ಡ್, ಲಿಂಕನ್, ಶೇಕ್ಷ್ಪೀಯರ್- ಹೀಗೆ ನಮ್ಮ ಸೃಜನಶೀಲ ಪರಂಪರೆಯ 15 ವ್ಯಕ್ತಿ ಚಿತ್ರಗಳು ಇಲ್ಲಿದ್ದರೆ 9 ಸಾಂಸ್ಕೃತಿಕ ಚಿತ್ರಗಳೂ ಇವೆ ಎನ್ನುವುದನ್ನು ಮೇಲ್ಮಟ್ಟದಲ್ಲಿ ಹೇಳಬಹುದಾದರೂ ಶೂದ್ರರು ವ್ಯಕ್ತಿಯ ಕುರಿತು ಮಾತನಾಡುತ್ತಲೇ ಸಂಸ್ಕೃತಿಯನ್ನು ಕಟ್ಟಿಕೊಡುವ, ಸಾಂಸ್ಕೃತಿಕತೆಯನ್ನು ಬಿಂಬಿಸುತ್ತಲೇ ವ್ಯಕ್ತಿಗಳ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ಪೂರ್ಣತೆಯೆಡೆಗೆ ಮುಖ ಮಾಡಿದ ಸಂಸ್ಕೃತಿಯೊಂದಕ್ಕೆ ವ್ಯಕ್ತಿ ಹಾಗೂ ಸಮಷ್ಠಿಯ ಪ್ರಶ್ನೆಗಳಿರುವುದಿಲ್ಲ. ಶೂದ್ರರಿಗೂ ಬಹುತೇಕ ಪ್ರಶ್ನೆಗಳು ಇಲ್ಲಿಲ್ಲ. 24 ಲೇಖನಗಳಲ್ಲಿ 15 ವ್ಯಕ್ತಿಚಿತ್ರಗಳೆನ್ನುವುದು ಭಾಷಿಕ ಮಿತಿ. ಉಳಿದ 9 ಲೇಖನಗಳಲ್ಲಿಯೂ ಶೂದ್ರರು ಮಾತನಾಡಿದ್ದು ವ್ಯಕ್ತಿಗಳ ಕುರಿತೇ. ಆದರೆ ಅಲ್ಲಿ ಅವರೆಲ್ಲ ಸ್ಥಳಪುರಾಣಕ್ಕೆ ಪೂರಕವಾದವರು.
ಹೀಗೆ ಒಂದಷ್ಟುಓದುತ್ತಾ ಹೋದಂತೆ ನನ್ನ ಮನಸ್ಸಿನ ಇನ್ನೊಂದು ಮಗ್ಗುಲಲ್ಲಿ 3-4 ಬೇರೆ ಬೇರೆ ಕೃತಿಗಳು ಮುಖ ತೋರಿಸುತ್ತಿದ್ದವು. ನಾನು ಕೈ ಹಿಡಿದು ಬೆಳೆದ ಸಿಂಪಿ ಲಿಂಗಣ್ಣನವರತಲೆಮಾರಿನ ಹಿಂದೆ, ‘ಜನಾಂಗದ ಜೀವಾಳಜೊತೆಗೆ ಬಹುತೇಕ ಹಜಾರಿ ಪ್ರಸಾದ್ ದ್ವಿವೇದಿ ಬರೆದ, ನನ್ನ ತಂದೆ ನನಗೆ ಕಲಿಸಿದಜಿನ್ ಕೆ ಸಾಥ್ ಮೆನೆ ಜಿಯಾ ನಾಡಿನ ಅತ್ಯಂತ ಸರಳ ಸಂತ ಎನಿಸಿಕೊಂಡ ಸಿದ್ದೇಶ್ವರ ಸ್ವಾಮಿಗಳು ವೇದ್ಯ ಮಾಡಿದ ಸೋಮರ್ಸೆಟ್ ಮಾಮ್ಸಮ್ಮಿಂಗ್ ಅಪ್ಇವೆಲ್ಲವು ಇದೇ ಛಾಯೆಯ ಹೊತ್ತ ಮಹತ್ತರ ಕೃತಿಗಳು.
ನಾವು ಮಧುರಚೆನ್ನರ ನೆಲದವರು. ಭಾವ ಹಾಗೂ ವೈಚಾರಿಕ ಪ್ರಪಂಚದ ಸಾರ್ವಕಾಲಿಕ ಆದರ್ಶಗಳಾದ ಶರಣ, ಸೂಫಿ, ತತ್ವಪದಕಾರರ ಸುಖದವರು. ಬದುಕೆಲ್ಲವೂ ಯೋಗ, ಯೋಗಾಯೋಗ ಎನ್ನುವ ಭರವಸೆಯನ್ನು ಬಿತ್ತಿದವರು. ಇದು ಸತ್ಯ ಎನ್ನುವುದಕ್ಕೊಂದು ಸಾಕ್ಷಿ ದಿನ ಶೂದ್ರರ ಸಮಾರಂಭದಲ್ಲಿ ನನ್ನ ಉಪಸ್ಥಿತಿ.
ನಾನು ಪಿಯುಸಿ ವಿಧ್ಯಾರ್ಥಿಯಾಗಿದ್ದಾಗಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆಎಂದು ಹಾಡಿದ ಕವಿ, ಕಿವಿಗಳನ್ನರಸುತ್ತಲೇ ನನ್ನೂರಿಗೆ ಬಂದ ಸಂದರ್ಭ. ಅಂದು ಅವರೊಂದಿಗೆ ಶೂದ್ರ, ಕಾರ್ಯಕ್ರಮದ ಪ್ರಾರಂಭಕ್ಕೆ ನನ್ನಿಂದ ಕುವೆಂಪು ಅವರ ಪ್ರಾರ್ಥನೆ, ‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ...’ ಅಂದು ಹಾಡು ಹಾಡಿದ ನಾನು 30 ವರ್ಷಗಳ ನಂತರ ಮತ್ತೆ ನನ್ನದೇ ರೂಹಿನಿಂದ ಅದೇ ಮಹಾಕವಿಯ ಒಂದು ಪ್ರಾರ್ಥನೆಯನ್ನೇ ಹಾಡಿಸುತ್ತೇನೆ. ಆದರೆ ಅದಕ್ಕೆಸಿದ್ಧಾರ್ಥಎನ್ನುವ ಹೆಸರು ನನ್ನ ಮೈ ಮನಸ್ಸುಗಳ ಮುಂದುವರಿಕೆಯಾದ ಹಿರಿಯ ಮಗನದ್ದಾಗಿರುತ್ತದೆ.
ಮೂವತ್ತು ವರ್ಷಗಳಲ್ಲಿ ಭಾರತದ ಸಾವಿರಾರು ಪಾತ್ರಗಳು, ಲಕ್ಷಾಂತರ ಧ್ವನಿಗಳು, ಜೊತೆಗೆ ಅಮೇರಿಕಾ, ಚೀನಾ, ಕೆನಡಾ-ಹೀಗೆ ವಿಶ್ವಪರ್ಯಟನೆ ಮಾಡಿಯೂ ನನ್ನ ಮುಂದಿನ ಸಮಾರಂಭಕ್ಕೆ ಮಗು ಇದೇ ಪ್ರಾರ್ಥನೆಯನ್ನು ಹಾಡಬೇಕು ಎಂದು ಶೂದ್ರರು ಹಸಿಯುವುದಿದೆಯಲ್ಲ, ಅದುವೇ ಸಾಹಿತ್ಯದ, ಧರ್ಮದ ಸರಿಯಾದ ಗ್ರಹಿಕೆ. ಇದುವೇ ಧ್ಯಾನ, ಇದುವೇ ಪ್ರಪಂಚದ ಮಹಾ ಆಧ್ಯಾತ್ಮ ಮತ್ತು ಮಧುರಚೆನ್ನ ಗ್ರಹಿಕೆಯ ಮೇರು ಪರ್ವತ.
ಕೃತಿಯಲ್ಲಿ ಒಂದು ಕಡೆ ಶೂದ್ರರು ದಾಖಲಿಸುತ್ತಾರೆ, “1991ರಲ್ಲಿ ತಮ್ಮ ಧೀರ್ಘಕಾಲದ ಬದುಕಿನಿಂದ ನಿರ್ಗಮಿಸಿದಾಗ, ಉದ್ದೇಶಪೂರ್ವಕವಾಗಿಯೇ ಅವರ ಅಂತಿಮ ದರ್ಶನಕ್ಕೆ ಹೋಗಲಿಲ್ಲ. ನನ್ನದು ತಪ್ಪೊ-ಸರಿಯೋ ಗೊತ್ತಿಲ್ಲ. ಹಾಗೆ ನೋಡಿದರೆ ನಾನು ಬಹಳಷ್ಟು ಇಷ್ಟಪಟ್ಟ ವ್ಯಕ್ತಿಗಳ ನಿಧನಕ್ಕೆ ಹೋಗಿ ಗೌರವವನ್ನು ಸೂಚಿಸದೆ ಒಂಟಿತನವನ್ನು ಅನುಭವಿಸಿದ್ದೇನೆಅವರು ರೀತಿ ಹೇಳಿದ್ದು ಗೋರೂರು ರಾಮಸ್ವಾಮಿ ಅಯ್ಯಂಗಾರರ ಕುರಿತು
 ಈ ರೀತಿಯ ನಿವೇದನೆ ಕನ್ನಡದಲ್ಲಿ ನಾನು ಗಮನಿಸಿದಂತೆ ಬಹಳ ಕಡಿಮೆ. ಅದೇ ರೀತಿ ಚಂಪಾ ಒಂದೆಡೆ ಬರೆಯುತ್ತಾರೆ, “ಯಾವುದೇ ಜೀವ ತೀರಿಕೊಂಡಾಗ ನಾನು ಸಂತಾಪ ಸೂಚಿಸಲು ಹೋಗಿದ್ದರೂ, ಜೀವದ ಮೈಮೇಲೆ ಮಣ್ಣು ಹಾಕಲು ನನಗೆ ಮನಸ್ಸಾಗುವುದಿಲ್ಲಎಂದು. ಇದು ಬಹಳ ಮಹತ್ವದ ಮಾತು. ನಮ್ಮ ಇನ್ನೊಬ್ಬ ಮಹತ್ವದ ಕವಿ ಬೇಂದ್ರೆ ಮಧುರಚೆನ್ನರ ಅಂತಿಮ ದರ್ಶನಕ್ಕೆ ಹೋದ ಸಂದರ್ಭದಲ್ಲಿ ಅಳುತ್ತಿದ್ದ ಅವರ ಹೆಂಡತಿಯನ್ನು ಸಮಾಧಾನಿಸುತ್ತಾ ಹೇಳಿದ ಮಾತು, “ಯಾಕ ಅಳತೀ, ಯಾಕ ಅಳತೀ ತಾಯಿ, ನಾವು ಚೆನ್ನಮಲ್ಲಪ್ಪನನ್ನ ಹುಗದಿಲ್ಲ, ಚೆನ್ನಮಲ್ಲಪ್ಪನನ್ನ ಇಲ್ಲಿ ಬಿತ್ತೇವಿ
 ಇಲ್ಲಿ ಗೋರೂರು ರಾಮಸ್ವಾಮಿ ಅಯ್ಯಂಗಾರರವರ ಬಗ್ಗೆ ತೇರನಾಗಿ ಬರೆಯುತ್ತಲೇ ಶೂದ್ರರು ಎಲ್ಲೋ ಒಂದು ನೆಲೆಯಲ್ಲಿ ನನಗೆ ಪಾತ್ರಗಳ ಮಟ್ಟಕ್ಕೆ, ಘನ-ಗಂಭೀರ ವ್ಯಕ್ತಿತ್ವಕ್ಕೆ, ಜೀವನ ಪ್ರೀತಿಗೆ ಸಾಕ್ಷಿಯಾಗಿ ನಿಲ್ಲುತ್ತಾರೆ ಎಂದೆನಿಸಿದೆ. ಅವರ ಕೃತಿಹೀಗೆಯೇ ಒಂದಿಷ್ಟುಬರೀ 10-20 ನಿಮಿಷಗಳಲ್ಲಿ ಕಣ್ಣಾಡಿಸಿಬಿಡಬಹುದಾದ, ಅನುಭವಕ್ಕೆ ವೇದ್ಯವಾಗುವ ಕೃತಿಯಲ್ಲ. ಅದರೊಳಗಿನ ಒಂದೊಂದು ಪಾತ್ರವು ಒಂದೊಂದು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದವರೆಗೂ ತಮ್ಮ ವ್ಯಾಪ್ತಿ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತವೆ. ಆದರೆ ಅವೆಲ್ಲವುಗಳ ಉದ್ದೇಶ ದೇಶವೆಲ್ಲ ನೆಮ್ಮದಿಯಾಗಿರಬೇಕು, ಪ್ರಪಂಚವೆಲ್ಲವೂ ನೆಮ್ಮದಿಯಾಗಿರಬೇಕು, ಪ್ರೀತಿ ಎನ್ನುವ ಮಹಾಸೂತ್ರದಿಂದ ಬಂಧಿಸ್ಪಡಬೇಕು ಎಂದಾಗಿರುತ್ತದೆ. ಇಂಥ ಅಪರೂಪದ ಆಶಯವನ್ನು ಇಟ್ಟುಕೊಂಡ ಶೂದ್ರರ ಸಾಹಿತ್ಯ ಕೃಷಿ ನಿರಂತರವಾಗಿ ನಮ್ಮೊಂದಿಗಿರಲಿ, ಹೀಗೆ ನಮ್ಮನ್ನು ಪ್ರೀತಿಯಿಂದ ಸೇರಿಸುತ್ತಾ ಕಾಡುತ್ತಿರಲಿ ಎಂದು ಆಶಿಸುತ್ತೇನೆ.  

No comments:

Post a Comment